ಪೀಡ್‍ಮಾಂಟ್
	ಇಟಲಿಯ ವಾಯುವ್ಯ ಭಾಗದ ಪ್ರದೇಶ. ಅಲೆಸಾಂದ್ರಿಯ, ಆಸ್ವೀ, ಕೂನೋವೋ, ನೋವಾರ, ಟೋರೆನೋ ಮತ್ತು ವರ್ಚಿಲೀ ಪ್ರಾಂತ್ಯಗಳನ್ನು ಒಳಗೊಂಡಿದೆ. ವಿಸ್ತೀರ್ಣ 25,399 ಚ.ಕಿ.ಮೀ. ಜನಸಂಖ್ಯೆ 430565 (2001). ಆಡಳಿತ ಕೇಂದ್ರ ಟೂರಿನ್.

ಪೀಡ್‍ಮಾಂಟ್ ಪ್ರದೇಶದ ದಕ್ಷಿಣ, ಪಶ್ಚಿಮ ಮತ್ತು ಉತ್ತರದಲ್ಲಿ ಅಪೆನೀನೊಲಿಗೂರೆ ಹಾಗೂ ಸಮುದ್ರದಂಚಿನ ಕೋಯಟಿನ್, ಗ್ರಾಯೀಯನ್ ಮತ್ತು ಪೆನೈನ್ ಆಲ್ಪ್ಸ್ ಪರ್ವತಗಳೂ ಮಧ್ಯ ಭಾಗದಲ್ಲಿ ಪೋ ನದೀ ಬಯಲಿನ ಫಲವತ್ತಾದ ವ್ಯವಸಾಯ ಭೂಮಿಯೂ ಇವೆ. ಇಟಲಿಯ ಪರ್ವತ ಪ್ರದೇಶದ ನಡುವೆ ಇರುವ ವ್ಯವಸಾಯ ಯೋಗ್ಯ ಬಯಲುಗಳಿಗೆ ಪೀಡ್‍ಮೌಂಟ್ (ಬೆಟ್ಟ ತಪ್ಪಲ ಭೂಮಿ) ಎಂಬ ಹೆಸರುಂಟು. ಪೋ ನದಿಯ ದಕ್ಷಿಣ ಭಾಗದಲ್ಲಿ ಆಲ್ಟ್ಸ್ ತಪ್ಪಲಲ್ಲಿರುವ ಸರೋವರಗಳು ಮಜೋರೇ ಮತ್ತು ಓರ್ಟಾ. ಪೋ ಹಾಗೂ ಅದರ ಉಪನದಿಗಳಾದ ಡೋರಾಬಾಲ್ಟಿಯ, ಡೋರಾ ರಿಪಾರಿಯ, ಸೆಸೀಯ, ಟನಾರೊ ಮತ್ತು ಸ್ಕ್ರೀವಿಯ ಇವು ವ್ಯವಸಾಯಕ್ಕೆ ಸಾಕಷ್ಟು ನೀರನ್ನು ಒದಗಿಸುತ್ತವೆ.

ರೋಮ್ ಚಕ್ರಾಧಿಪತ್ಯದ ಕಾಲದಲ್ಲಿ ಪೀಡ್‍ಮಾಂಟನ ಕಣಿವೆ ಮಾರ್ಗಗಳ ಮೂಲಕ ಉತ್ತರದ ಆಲ್ಪ್ಸ್ ಪರ್ವತಗಳಾಚೆಯ ಪ್ರಾಂತ್ಯಗಳೊಡನೆ ಸಂಪರ್ಕ ಇದ್ದುದರಿಂದ ಆ ಕಾಲದಲ್ಲಿ ಪೀಡ್‍ಮಾಂಟ್ ಪ್ರಾಮುಖ್ಯವಿತ್ತು. ತರುವಾಯ ಈ ಭಾಗ ಲೊಂಬಾರ್ಡ್ ಹಾಗೂ ಫ್ರಾಂಕ್ ಜನರ ಅಧೀನವಾಗಿ 14 ನೆಯ ಶತಮಾನದ ಹೊತ್ತಿಗೆ ಸವಾಯ್ ಸಂತತಿಯ ಅರಸರ ಆಳ್ವಿಕೆಗೆ ಒಳಪಟ್ಟಿತು. 17 ನೆಯ ಶತಮಾನದವರೆಗೆ ಈ ಅರಸರು ಸಾರ್ಡೀನಿಯ ದ್ವೀಪವೂ ಸೇರಿದಂತೆ ಇಡೀ ಪೀಡ್‍ಮಾಂಟ್ ಪ್ರದೇಶದ ಮೇಲೆ ಪ್ರಭುತ್ವ ಹೊಂದಿದ್ದರು. ಇಟಲಿಯ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ (1848-1859) ಪೀಡ್‍ಮಾಂಟ್ ಇಟಲಿಯ ವಿವಿಧ ರಾಜ್ಯಗಳ ಸಂಘಟನೆಯಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ಪೀಡ್‍ಮಾಂಟ್ ಮತ್ತು ಸಾರ್ಡೀನಿಯಗಳ ಅರಸ 2 ನೆಯ ಇಮ್ಯಾನ್ಯುಯೆಲ್ ಸಂಘಟಿತ ಇಟಲಿಯ ಪ್ರಪ್ರಥಮ ದೊರೆಯಾದ (1861).

ಪೀಡ್‍ಮಾಂಟಿಗೆ ಸೇರಿದ ಆಲ್ಪ್ಸ್ ಪರ್ವತದ ನದಿಗಳು ಉತ್ತರ ಇಟಲಿಯ ವಿದ್ಯುಚ್ಛಕ್ತಿ ಪೂರೈಕೆಗೆ ಸಹಾಯಕವಾಗಿವೆ. ಅರಣ್ಯಗಳಲ್ಲಿ ಉಪಯುಕ್ತವಾದ ಗಟ್ಟಿ ಮರಗಳಿವೆ. ಆಲ್ಪ್ಸ್ ತಪ್ಪಲಿನ ಬಯಲುಗಳಲ್ಲಿ ಪಶುಪಾಲನೆ ಹಾಗೂ ಹೈನುಗಾರಿಕೆ ಮುಖ್ಯ ಕಸುಬುಗಳು. ಇಲ್ಲಿಯ ಪ್ರಧಾನ ಬೆಳೆಗಳು ಗೋಧಿ, ಬತ್ತ, ತರಕಾರಿ ಹಾಗೂ ಹಣ್ಣು. ಪೋ ನದಿಯ ದಕ್ಷಿಣ ಭಾಗಗಳಲ್ಲಿ ಇಟಲಿಯ ಉತ್ತಮ ಮದ್ಯಕ್ಕೆ ಅಗತ್ಯವಾದ ದ್ರಾಕ್ಷಿ ಬೆಳೆಯುತ್ತಾರೆ. ಇಟಲಿಯ ಕೈಗಾರಿಕೆಯಲ್ಲಿ ಪೀಡ್‍ಮಾಂಟಿನ ಪಾತ್ರ ಗಮನಾರ್ಹವಾದದ್ದು. ಪೀಡ್‍ಮಾಂಟಿನ ಆಡಳಿತ ಕೇಂದ್ರವಾದ ಟೂರಿನನ್‍ನಲ್ಲಿ ಮೋಟಾರು ವಾಹನ, ಹತ್ತಿ ಬಟ್ಟೆ, ಗಾಜಿನ ಸಾಮಾನು ಮತ್ತು ಯಂತ್ರೋಪಕರಣ ತಯಾರಾಗುತ್ತವೆ. 

ಫ್ರಾನ್ಸ್ ಮತ್ತು ಇಟಲಿ ದೇಶಗಳ ನಡುವೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಟೋರೆನೋ-ಸೆನಿಸ್ ಪರ್ವತ ಸುರಂಗವನ್ನು ಹಾದು ಹೋಗುತ್ತದೆ. ಉತ್ತರದಲ್ಲಿ ಸಿಂಪ್ಲಾನ್ ಸುರಂಗದ ಮೂಲಕ ಸಾಗುವ ರೈಲು ಮಾರ್ಗ ಸ್ವಿಟ್‍ಜûರ್ಲೆಂಡ್ ಕಡೆ ಹೋಗುತ್ತದೆ. ಪೀಡ್‍ಮಾಂಟಿನ ರಸ್ತೆಗಳ ಜಾಲದಿಂದ ಅನೇಕ ಪಟ್ಟಣಗಳ ನಡುವೆ ಸಂಪರ್ಕ ಏರ್ಪಟ್ಟಿದೆ. ಈ ಪ್ರದೇಶದಿಂದ ಜಿನೋವ ರೇವು ಪಟ್ಟಣಕ್ಕೆ ಉತ್ತಮ ರಸ್ತೆ ಇದೆ. ಇತ್ತೀಚೆಗೆ ಫ್ರಾನ್ಸ್ ಮತ್ತು ಇಟಲಿಗಳ ನಡುವೆ ಬ್ಲಾನ್ ಸುರಂಗದ ಮೂಲಕ ಹಾದು ಹೋಗುವ ಹೊಸ ರಸ್ತೆ ನಿರ್ಮಾಣವಾಗಿದೆ.				 (ಪಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ